ಶಿವಾಲಿಕ್ ಶಿಲಾ ಸ್ತೋಮ
	ಹಿಮಾಲಯ ಪರ್ವತದ ತಪ್ಪಲು ಪ್ರದೇಶದುದ್ದಕ್ಕೂ 1,600 ಕಿಮೀ ಉದ್ದ, 16-100 ಕಿಮೀ ಅಗಲ, ಸಮುದ್ರಮಟ್ಟಕ್ಕಿಂತ 700-900 ಮೀ ಎತ್ತರದಲ್ಲಿರುವ ಮೃದು ಮರಳು ಶಿಲೆ, ಪೆಂಟ್ ಶಿಲೆ ಮತ್ತು ಜೇಡು ಶಿಲೆಗಳ ಸಮುಚ್ಚಯ. ಮುಖ್ಯವಾಗಿ ಹಿಮಾಲಯದ ಬುಡ ಅಥವಾ ಪಾದ ಪ್ರದೇಶ. ಇದು ಬೆಟ್ಟ, ಗುಡ್ಡ, ಕಣಿವೆ ಮತ್ತು ಕಂದಕಗಳಿಂದ ಕೂಡಿದೆ. ಭೂವಿಜ್ಞಾನಿಗಳು ಈ ಶಿಲೆಗಳಲ್ಲಿ ಅಡಗಿರುವ ಸಸ್ತನಿ ಮತ್ತು ಸಸ್ಯ ಜೀವ್ಯವಶೇಷಗಳ ಅಧ್ಯಯನದಿಂದ ಇದರ ವಯೋಮಿತಿಯನ್ನು ಮಧ್ಯ ಮಯೋಸೀನ್ ಯುಗದಿಂದ (ಸು. 13 ಮಿಲಿಯನ್ ವರ್ಷ ಪ್ರಾಚೀನದಿಂದ ಸು. 1 ಮಿಲಿಯನ್ ವರ್ಷ ಪ್ರಾಚೀನದವರೆಗೆ) ಕೆಳಗಣ ಪ್ಲಿಸ್ಟೋಸೀನ್ ಯುಗದ ತನಕ ಎಂದು ನಿರ್ಣಯಿಸಿದ್ದಾರೆ. ಈ ಯುಗದ ಶಿಲೆಗಳನ್ನು ಮೊದಲಿಗೆ ಹರಿದ್ವಾರದ ಸಮೀಪವಿರುವ ಶಿವಾಲಿಕ್ ಬೆಟ್ಟಪಂಕ್ತಿಯ ಜಲಜ ಶಿಲೆಗಳಿಗೆ ಅನ್ವರ್ಥಕವಾಗಿ ಶಿವಾಲಿಕ್ ಶಿಲಾವರ್ಗ ಹಾಗೂ 320 ಕಿಮೀ ವ್ಯಾಪ್ತಿಯ ಪ್ರದೇಶವನ್ನು ಪ್ರರೂಪ ಪ್ರದೇಶ (ಟೈಪ್ ಏರಿಯ) ಎಂದು ಹೆಸರಿಸಲಾಯಿತು. ಅಲ್ಲದೆ ಈ ಸ್ಥಳದಿಂದಲೇ ಪ್ರಥಮ ಬಾರಿಗೆ ವಿಪುಲವಾದ ಜೀವ್ಯವಶೇಷಗಳನ್ನು ಹೊರತೆಗೆದುದರಿಂದ ಇಡೀ ಪ್ರಪಂಚದಲ್ಲಿ ಶಿವಾಲಿಕ್ ಶಿಲಾವರ್ಗ ಎಂದೇ ಪ್ರಖ್ಯಾತವಾಯಿತು. ಹಿಮಾಲಯದಲ್ಲಿ ಹುಟ್ಟಿ ಹರಿಯುವ ನದಿಗಳು ಹಾಗೂ ಉಪನದಿಗಳು ಹೊತ್ತುತಂದ ಮೆಕ್ಕಲು ಮಣ್ಣು ಆ ಪರ್ವತದ ಪಾದ ಅಥವಾ ಬುಡದಲ್ಲಿ ಸಂಚಯಿಸುವುದರಿಂದ ಶಿವಾಲಿಕ್ ಶಿಲೆಗಳು ಉಂಟಾಗಿವೆ. ಇದು ಹೇಗಿದೆ ಎಂದರೆ ಈವೊತ್ತಿಗೂ ಸಿಂಧೂ-ಗಂಗಾ-ಯಮುನ-ಬ್ರಹ್ಮಪುತ್ರ ನದೀ ಬಯಲಿನಲ್ಲಿ ಸಂಚಯವಾಗುತ್ತಿರುವ ಮೆಕ್ಕಲಿನಂತೆಯೆ ಇದೆ. ಆದರೆ ಇತ್ತೀಚಿನ ಮೆಕ್ಕಲಿನಲ್ಲಿ ಶಿವಾಲಿಕ್ ಶಿಲೆಗಳಲ್ಲಿ ಕಂಡುಬರುವ ಮೇಲೊತ್ತರಿಕೆ, ಮಡಿಕೆಗಳು, ಜೀವ್ಯವಶೇಷಗಳು ಮುಂತಾದವು ಕಂಡುಬರುತ್ತಿಲ್ಲ. ಶಿವಾಲಿಕ್ ಶಿಲೆಗಳು ಹಿಮಾಲಯದ ಮೇಲೊತ್ತರಿಕೆಯಲ್ಲಿ ಭಾಗಿಯಾಗಿವೆಯಾಗಿ ಅಧಿಕ ಒತ್ತಡದ ಶಿಲಾ ವಲಯಗಳು ಇವುಗಳಲ್ಲಿ ಮಾತ್ರ ಕಾಣಸಿಗುತ್ತವೆ.

	ಈ ಯುಗದ ಶಿಲಾ ಸಮುದಾಯ ನೇಪಾಲ-ಸಿಕ್ಕಿಮ್ ರಾಜ್ಯದ ಟ್ರಿಸ್ಟ ನದಿಯಿಂದ ಆರಂಭವಾಗಿ ಎರಡೂ ಬದಿಗಳಿಗೆ ವಿಸ್ತರಿಸಿದೆ. ಅಂದರೆ ಪಶ್ಚಿಮ ಪಾಕಿಸ್ತಾನದ ಉತ್ತರದಿಂದ ಸಿಂಧೂ-ಗಂಗಾ-ಬ್ರಹ್ಮಪುತ್ರ ನದಿಗಳ ಉದ್ದಗಲಕ್ಕೂ ವಿಸ್ತರಿಸಿರುವುದಲ್ಲದೆ ಮಯನ್ಮಾರ್‍ನ ಇರವಾಡಿ ಪ್ರದೇಶದವರೆವಿಗೂ ಕಾಣಸಿಗುತ್ತದೆ. ಇಷ್ಟೊಂದು ವಿಸ್ತಾರವಾದ ಭೂಭಾಗದಲ್ಲಿದ್ದ ಕುರುಚಲು ಪೊದೆ ಕಾಡನ್ನು ನಿರ್ಮೂಲನ ಮಾಡಿರುವುದರಿಂದ ಅಧಿಕ ಭೂಸವೆತವಾಗುತ್ತಿದ್ದು, ಅಲ್ಲಲ್ಲಿ ಮಳೆಬಾರದ ಸಮಯದಲ್ಲಿ ಬೋಳಾದ ಬಂಜರು ಪ್ರದೇಶವನ್ನು ಪ್ರದರ್ಶಿಸುತ್ತದೆ. ಇದೇ ತೆರನಾದ ಶಿಲಾವರ್ಗವನ್ನು ಬೇರೆ ಸ್ಥಳಗಳಲ್ಲಿ ಬೇರೆ ಹೆಸರುಗಳಿಂದ ಕರೆಯುತ್ತಾರೆ; ಬಲೂಚಿಸ್ತಾನದಲ್ಲಿ ಇದಕ್ಕೆ ಮೆಕ್ರಾನ್ ವರ್ಗ ಎಂದೂ ಸಿಂಧ್ ಪ್ರಾಂತ್ಯದಲ್ಲಿ ಮಂಚಾರ್ ಸ್ತರಗಳೆಂದೂ ಅಸ್ಸಾಮ್‍ನಲ್ಲಿ ಟಿಪ್ಸಮ್ ಮತ್ತು ಡೈಹಿಂಗ್ ಎಂದೂ ಮಯನ್ಮಾರ್ ನಲ್ಲಿ (ಬರ್ಮಾ) ಇರವಾಡಿ ಎಂದೂ ಹೆಸರಿಸಲಾಗಿದೆ. ಈ ಶಿಲಾಶ್ರೇಣಿ ಗಳನ್ನು ಕುರಿತ ಇತ್ತೀಚಿನ ಅಧ್ಯಯನ, ಸಂಶೋಧನೆಗಳಿಂದ ಈ ಶಿಲಾಸಮುದಾಯವನ್ನು ಬೃಹತ್‍ವರ್ಗವೆಂದು (ಸೂಪರ್ ಗ್ರೂಪ್) ಪರಿಗಣಿಸಲಾಗಿದೆ. ಶಿವಾಲಿಕ್ ಯುಗದ ಪ್ರಾಣಿ ಸಂಕುಲ ಹೆಚ್ಚಾಗಿ ಇಂದಿನ ಪ್ರಾಣಿಗಳನ್ನೇ ಹೋಲುತ್ತದೆ. ಶಿವಾಲಿಕ್ ಬೆಟ್ಟಗಳಲ್ಲಿ ಎಲ್ಲೆಲ್ಲಿ ನದಿ ಕೊರಕಲು ಇಲ್ಲವೆ ಕಣಿವೆಗಳಿವೆಯೋ ಅಲ್ಲಿ ಆಶ್ಚರ್ಯಕರ ಪಳೆಯುಳಿಕೆಗಳು ಸ್ತನಿ ಮೂಳೆಗಳು, ಶಿರ, ದವಡೆ, ಕೊಂಬು, ದಂತ, ಸಿಹಿನೀರ ಶಂಖಗಳು, ಏಕದಳ, ದ್ವಿದಳ ಸಸ್ಯ ಹಾಗೂ ಮರಗಳ ಜೀವ್ಯವಶೇಷಗಳು ದೊರೆತಿವೆ.

	ಶಿವಾಲಿಕ್ ಶಿಲಾಸ್ತೋಮ ಹಲವು ವಿಧ. ಅಲ್ಲಿ ಶಿಲಾಗಸಿ, ಒರಟು ಕಣಯುತ ಮರಳುಶಿಲೆ, ಮರಳು, ಶಿಲಾ ಚೂರುಗಳ ಜೇಡು ಮತ್ತು ಪೆಂಟಿಗಳು ಸಮೃದ್ಧವಾಗಿವೆ. ಅವುಗಳ ದಪ್ಪ 5,000-6,000 ಮೀ ಗೂ ಮೀರಿದೆ. ಇದರ ಶಿಲಾ ಸಂಯೋಜನೆ ಬಹುಪಾಲು ಇಂದಿನ ಮೆಕ್ಕಲಿನಂತೆ ಇದ್ದರೂ ಅರ್ಧಂಬರ್ಧ ಗಟ್ಟಿಯಾದ ನುಣ್ಣನೆಯ ಅಭ್ರಕಯುಕ್ತ ಮರಳು ಶಿಲೆ ಹಾಗೂ ಕೆಂಪು ಇಲ್ಲವೆ ಕಡುಕೆಂಪು ವರ್ಣದ ಜೇಡು ಶಿಲೆಗಳ ಅಂತರ ಪದರಗಳೂ ಇಲ್ಲಿವೆ. ಶಿಲಾ ಚರಿತ್ರೆಯಿಂದ ತಿಳಿದು ಬಂದಿರುವ ಅಂಶವೆಂದರೆ, ಮಧ್ಯ ಹಿಮಾಲಯದ ತಿರುಳಿನಂತಿರುವ ಗ್ರಾನೈಟ್ ಶಿಲೆ ಶಿವಾಲಿಕ್ ನದಿಯ ಸವೆತದಿಂದ ಬಂದಂಥ ಮರಳು, ಪೆಂಟಿಗಳು, ಶಿಲಾಚೂರುಗಳು ನದಿಯ ಶೀಘ್ರ ಸಂಚಯನವನ್ನು ಸೂಚಿಸುತ್ತದೆ. ಅಲ್ಲದೆ, ಹೆಚ್ಚು ಮಂದವಾದ ಜೇಡು ಮತ್ತು ನುಣ್ಣನೆಯ ಮರಳು ನದಿ ಪ್ರವಾಹ ಮೈದಾನದ ಸಂಚಯನವನ್ನು ಸೂಚಿಸುತ್ತದೆ. ಇದೂ ಅಲ್ಲದೆ, ಶಿವಾಲಿಕ್ ಯುಗದ ಕಾಲದಲ್ಲಿ ಹಿಮಾಲಯ ಪರ್ವತವು ಮೇಲೇರುತ್ತಿದ್ದುದರಿಂದ ನದಿಗಳ ಹರವಿಗೆ ಹೆಚ್ಚು ಇಳಿಜಾರು ಉಂಟಾಗಿ ನದಿಯು ವೇಗವಾಗಿ ಹರಿಯುವ ಶಕ್ತಿಯನ್ನೇ ಅಲ್ಲದೆ ಶೀಘ್ರ ಸಂಚಯನಕ್ಕೂ ಸಹಕಾರಿಯಾಯಿತು. ಈ ಶಿಲಾಸ್ತೋಮವನ್ನು ಜೀವ್ಯವಶೇಷಗಳನ್ನು ಆಧರಿಸಿ ಅನುಕ್ರಮವಾಗಿ ಕೆಳಗಣ, ಮಧ್ಯ ಮತ್ತು ಮೇಲಣ ಶಿವಾಲಿಕ್ ಸಂಚಯನ ಎಂಬ ಮೂರು ಉಪವರ್ಗಗಳಾಗಿ ವಿಂಗಡಿಸಿ, ಶಿಲೆಗಳು ದೊರೆತ ಸ್ಥಳಗಳ ಹೆಸರನ್ನೇ ಅದರ ಉಪವರ್ಗ ಮತ್ತು ಹಂತಗಳಿಗೆ ಸೂಚಿಸಿದ್ದಾರೆ. 

	ಕೆಳಗಣ ಶಿವಾಲಿಕ್ ಶಿಲಾವರ್ಗ : ಇದರ ಮಂದತೆ 1,700 ಮೀ. ಪೊಟ್ವಾರ್ ಪ್ರಸ್ಥಭೂಮಿಯ ಉತ್ತರದ ಅಂಚು ಲವಣಶ್ರೇಣಿ ಶಿಲೆಗಳ ಮೇಲೆ ಕಾಂಗ್ರ ಮತ್ತು ಹರಿದ್ವಾರಗಳ ನಡುವಿನ ಪ್ರದೇಶ ಕೆಳಗಣ ಶಿಲಾಲಿಕ್ ಶಿಲೆಗಳ ಪ್ರರೂಪ ಪ್ರದೇಶ. ಇಲ್ಲಿಯ ಶಿಲೆಗಳು ಸಾಮಾನ್ಯವಾಗಿ ಕೆಂಪು ಗಟ್ಟಿ ಮರಳು ಶಿಲೆ, ಕಡುಗೆಂಪು ಬಣ್ಣದ ಜೇಡು ಶಿಲೆಗಳು. ಶಿವಾಲಿಕ್ ಶಿಲಾಸ್ತೋಮದ ಅತ್ಯಂತ ಹಳೆಯ ಶಿಲೆಗಳಿವು. ಖ್ಹಾರ್ ಎಣ್ಣೆ ಬಾವಿಗೆ ಸಮೀಪವಿದ್ದು ಪೊಟ್ವಾರ್ ಎಂಬ ಸ್ಥಳಕ್ಕೆ ಸ್ವಲ್ಪ ದೂರದಲ್ಲಿವೆ. ಈ ಕಾಲದ ಶಿಲೆಗಳು ಮುಖ್ಯವಾಗಿ ಕಮ್ಲಿಯಾಲ್ ಎಂಬ ಪ್ರದೇಶದಲ್ಲಿ ವಿಶೇಷತಃ ಕಾಣಿಸಿಕೊಂಡಿವೆ. ಆದ್ದರಿಂದ ಇವುಗಳಿಗೆ ಕಮ್ಲಿಯಾಲ್ ಹಂತವೆಂದು ಹೆಸರು. ಪಂಜಾಬ್ ಪ್ರದೇಶದಲ್ಲಿ ಹೆಚ್ಚು ಅವಶೇಷಗಳು ಸಂಚಿತವಾಗಿವೆ. ಗೊರಸುಳ್ಳ ಕಶೇರುಕ ಪ್ರಾಣಿಗಳ ಅವಶೇಷಗಳನ್ನಿಲ್ಲಿ ಕಾಣಬಹುದು.

	ಮಧ್ಯ ಶಿವಾಲಿಕ್ ಹಂತ : ಈ ಕಾಲ ಖಂಡದ ಶಿಲೆಗಳನ್ನು ಎರಡು ವಲಯಗಳಾಗಿ ವಿಭಾಗಿಸಿದೆ. ನಗ್ರಿ ಎಂಬ ಪ್ರದೇಶದಲ್ಲಿ ಕಾಣಬರುವುದು ಮೊದಲನೆಯ ವಲಯ; ಇದು ಅಟ್ಟಾಕ್ ಜಿಲ್ಲೆಗೆ ಸೇರಿದ ಸ್ಥಳ. ಇಲ್ಲಿಯ ಶಿಲೆಗಳು ಸಾಮಾನ್ಯವಾಗಿ ಊದಾ ಇಲ್ಲವೆ ಮಾಸಲು ಹಳದಿ ಬಣ್ಣದ ಮರಳು ಶಿಲೆಗಳು. ಅಲ್ಲಲ್ಲಿ ಸ್ವಲ್ಪ ಬಿಳಿಯ ಜೇಡುಶಿಲೆಗಳಿವೆ. ಈ ವಲಯದಲ್ಲಿ ಶಿವಾಲಿಕ್ ಪ್ರಾಣಿ ಸಮೂಹದ ವಿಕಾಸವಾಗುವ ಆರಂಭ ದೆಸೆಯನ್ನು ಗುರುತಿಸಬಹುದು.

	ಎರಡನೆಯ ವಲಯ ನಗ್ರಿ ವಲಯದ ಶಿಲೆಗಳ ಮೇಲೆ ಸಂಚಿತವಾಗಿದೆ. ಇದು ಧಾಕ್‍ಪಥಾನ್ ವಲಯದಲ್ಲಿದೆ. ಇದು ಬಹುತೇಕ ಜೇಡುಶಿಲೆ, ಪೆಂಟಿ ಶಿಲೆಗಳಿಂದ ಕೂಡಿದೆ. ಈ ವಲಯದಲ್ಲಿ ಶಿವಾಲಿಕ್ ಶಿಲಾ ಸ್ತೋಮದ ಅಧಿಕ ಸಂಖ್ಯೆಯ ಅವಶೇಷಗಳನ್ನು ಕಾಣಬಹುದು.

	ಮೇಲಣ ಶಿವಾಲಿಕ್ ಹಂತ : ಟಟ್ರಾಟ್ ವಲಯ, ಪಿಂಜೋರ್ ವಲಯ, ಬೋಲ್ಡರ್ ಕಂಗ್ಲಾಮೆರೇಟ್ ವಲಯ ಎಂದು ಮೂರು ವಲಯಗಳಿವೆ. ಈ ಹಂತದ ಕಾಲಾವಧಿ ಕೆಳಗಿನ ಪ್ಲಿಸ್ಟೋಸೀನಿನಿಂದ ಕೆಳಗಿನ ಪ್ಲಿಯೋಸೀನ್ ಕಾಲ ಎಂದು ಗುರುತಿಸಲಾಗಿದೆ. ಟಟ್ರಾಟ್ ಎಂಬ ಸ್ಥಳದಲ್ಲಿ ಪೆಂಟಿಶಿಲೆಗಳು, ಮೆದು ಮರಳುಶಿಲೆ ಹಾಗೂ ಕಂದುಬಣ್ಣದ ಜೇಡು ಸಂಚಯನಗೊಂಡಿದೆ. ಇವು ಅತಿವೃಷ್ಟಿಯ ಕಾಲದಲ್ಲಿ ಸಂಚಯಿಸಿದವು. ಇವುಗಳಲ್ಲಿ ಆನೆ, ನೀರಾನೆ, ಹಂದಿ, ದನಕರುಗಳು, ಕುದುರೆಗಳ ಜೀವ್ಯವಶೇಷಗಳು, ಈಕ್ವಸ್ ಶಿವಾಲೆನ್ಸಿಸ್ ಮೂಳೆ ದಂತದ ಅವಶೇಷಗಳು ಹೇರಳವಾಗಿ ದೊರೆತಿವೆ. ಅಂತಾರಾಷ್ಟ್ರೀಯ ಶಿಲಾ ಕೋಷ್ಠದಲ್ಲಿ ಇದನ್ನು ಆಸ್ಟಿಯನ್ ಕಾಲಕ್ಕೆ ಸಮ ಎಂದು ಪರಿಗಣಿಸಲಾಗಿದೆ.

	ಬೋಲ್ಡರ್ ಕಂಗ್ಲಾಮರೇಟ್ ವಲಯ ಶಿವಾಲಿಕ್ ಶಿಲಾಸ್ತೋಮದ ಕೊನೆಯ ಹಂತ. ಇದರಲ್ಲಿ ಹೆಚ್ಚು ಒರಟು ಮೈವಳಿಕೆ ಇರುವ ಬಂಡೆಗಳು ಸಂಚಯಿಸಿವೆ. ಪಿಂಜೋರ್ ಶಿಲಾವಲಯ ಕಾಲಾಂತ್ಯದ ವೇಳೆಗೆ ಹಿಮಾಲಯ ಪರ್ವತ ವಿಕಾಸಗೊಂಡು ಈ ವಲಯದ ಎತ್ತರ ವೃದ್ಧಿಸಿದುದರಿಂದ ಇಲ್ಲಿ ಪೆಂಟಿ ಬಂಡೆಗಳು ಮೈದಳೆದುವು. ವಾಯುಗುಣದ ವೈಪರೀತ್ಯ ಆರಂಭವಾಗಿ ಸ್ತನಿಗಳು ಈ ಪ್ರದೇಶದಿಂದ ಬೇರೆಡೆಗೆ ವಲಸೆ ಹೋದುವು. ಇಂಥ ಸಂಧಿಕಾಲದಲ್ಲಿ ಮಾನವನ ಉಗಮವಾಯಿತು.

	ಇದೇ ತೆರನಾದ ಶಿಲೆಗಳನ್ನು ಭಾರತದ ವಿವಿಧ ಭಾಗಗಳಲ್ಲಿ ಕಾಣುವೆವು. ಆ ಶಿಲಾ ಹಂತಗಳಿಗೆ ಸ್ಥಳೀಯ ಹೆಸರುಗಳನ್ನೇ ಕೊಡಲಾಗಿದೆ. ಇಂಥ ಸಹಸಂಬಂಧಿ ಶಿಲೆಗಳೇ ಅಸ್ಸಾಮಿನ ತಿಪಮ್ (3,000 ದಿಂದ 8,000 ಮೀ ಮಂದ) ಗಿರುಜನ್ ಜೇಡುಶಿಲೆಗಳು (6,000 ಮೀ ಮಂದ) ಹಾಗೂ ಡೂಪ್ಟಿಲಾ ಶಿಲಾಶ್ರೇಣಿ (3,000 ಮೀ ಮಂದ) ಇವನ್ನು ಮಯೊಪ್ಲಿಯೊಸೀನ್ ಯುಗದ ಶಿಲೆಗಳೆಂದು ಪರಿಗಣಿಸಲಾಗಿದೆ. ಮೇಲಣ ಅಸ್ಸಾಮ್, ನಾಗ ಮತ್ತು ಸಿಲ್ಹೆಟ್ ಬೆಟ್ಟಗಳಲ್ಲಿ ಹೆಚ್ಚು ಪೆಂಟಿಗಳಿಂದ ಕೂಡಿದ ಅಲ್ಪಸ್ವಲ್ಪ ಮರಳು ಮತ್ತು ಜೇಡುಶಿಲಾ ಪೊರೆಗಳಿರುವ ಡೈಹಿಂಗ್ ಶಿಲಾಶ್ರೇಣಿಯನ್ನು ಮೇಲಿನ ಶಿವಾಲಿಕ್ ಯುಗಕ್ಕೆ ಸಮವಾದುದೆಂದು ನಿರ್ಧರಿಸಲಾಗಿದೆ. ಮಯನ್ಮಾರ್ ನಲ್ಲಿಯೂ (ಬರ್ಮ) ಶಿವಾಲಿಕ್ ಯುಗದ ಶಿಲೆಗಳಿವೆ. ಇವುಗಳಿಗೆ ಇರವಾಡಿ ಶಿಲಾಸ್ತೋಮವೆಂದು ಹೆಸರು (ಮಧ್ಯ ಮತ್ತು ಮೇಲಿನ ಶಿವಾಲಿಕ್ ವರ್ಗಕ್ಕೆ ಸಮ). ಬೆಂಗಾಲ್ ಬೇಸಿನ್‍ನಲ್ಲಿ 900 ಮೀ ಮಂದದ ಶಿಲಾ ಸಮುದಾಯವನ್ನು ದೇಖಗ್ರಾಮ್ ಶಿಲಾಸ್ತೋಮ ವೆಂದು ಕರೆದಿದೆ. ಕಚ್ಚ್ ಪ್ರದೇಶದಲ್ಲಿ ಕಂಕವತಿ ಪದರಗಳು, ಕಾಥೈವಾರ್ ಪ್ರದೇಶದ ಸಿರಾಮ್ ಶಿಲಾಪದರಗಳು ಹಾಗೂ ದ್ವಾರಕಾ ಸ್ತರಗಳು ಈ ಶಿಲಾವರ್ಗಕ್ಕೆ ಸೇರಿದವು. ಕೇರಳದ ವಾರ್ಕಲೆ ಸ್ತರಗಳು (90 ರಿಂದ 120 ಮೀ) ಲಿಗ್ನೈಟ್‍ಯುಕ್ತವಾಗಿವೆ, ಕ್ವಿಲಾನ್ ಸುಣ್ಣಶಿಲೆಗಳು ಇದೇ ವರ್ಗಕ್ಕೆ ಸೇರಿದವು. ಕಡಲೂರು ಮತ್ತು ರಾಜಮಹೇಂದ್ರಿ ಮರಳು ಶಿಲೆಗಳು ಕಾವೇರಿ ಬೇಸಿನ್‍ನ ಕಾರೈಕಲ್ ಸ್ತರಗಳು ಹಾಗೂ ಪಾಂಡಿಚೇರಿ ಯಿಂದ ರಾಮೇಶ್ವರದವರೆಗೆ ಹಬ್ಬಿರುವ ಕಾಂಜೀವರಮ್ ಗ್ರಾವೆಲ್ಸ್ (ಪೆಂಟಿಗಳ) ಶಿವಾಲಿಕ್ ಶಿಲಾವರ್ಗದ ಕಾಲಾವಧಿಯಲ್ಲಿ ಸಂಚಯನಗೊಂಡವು. ಮೇಲೆ ಹೇಳಿದ ಶಿಲಾಸ್ತರಗಳಲ್ಲಿ ಆರ್ಥಿಕ ಖನಿಜಗಳಾದ ಬಿಳಿಜೇಡು, ಕಾವುಜೇಡು (ಫೈರ್‍ಕ್ಲೆ) ಲಿಗ್ನೈಟ್‍ಗಳು ದೊರೆಯುವುವು. ಇವುಗಳಿಗೆ ವಿಶೇಷ ಪ್ರಾಮುಖ್ಯವಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ